ಮಲೆನಾಡಿನ ಭಾವನಾತ್ಮಕ ಕೊಂಡಿ ಸವಕಲಾಯಿತು | ಸಹಕಾರ ನೀಡದ ಸರಕಾರ !


ಜಾಹಿರಾತು


ದೇಶದ ಮೊದಲ ಸಹಕಾರ ಸಂಸ್ಥೆ ಕೆಲ ವರ್ಷಗಳಿಂದ ಕುಂಟುತ್ತ ಸಾಗಿ ಈಗ ಶಾಶ್ವತವಾಗಿ ಮುಚ್ಚುವ ಹಂತ ತಲುಪಿ ಫೆ, 16 ರಂದು ತನ್ನ ಕಂಪನಿಗೆ ಅಧಿಕೃತವಾಗಿ ಬಾಗಿಲೆಳೆದುಕೊಂಡಿದೆ.

ಅಂದು ಅನಭಿಶಕ್ತ ದೊರೆಯಂತೆ ಮೆರೆದ ಸಹಕಾರ ಸಂಸ್ಥೆಯಲ್ಲೀಗ ಅಸಹಕಾರ. ಸಂಬಳ ಕೊಡೋಕು ಆಗ್ದೆ ಮುಚ್ಚುವ ಹೊಸ್ತಿಲಲ್ಲಿದೆ. ಕಾರ್ಮಿಕರ ಮನವಿಗೆ ಸರ್ಕಾರದ ಬಳಿಯೂ ಉತ್ತರವಿಲ್ಲ. ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಕಾರ ಸಾರಿಗೆ ಸಂಸ್ಥೆಗೆ ಅನುದಾನ ನೀಡಲು ಒಪ್ಪಿಗೆ ಕೊಟ್ಟರೂ ಹಣಕಾಸು ಇಲಾಖೆ ಅಧಿಕಾರಿಗಳಿಂದ ತಿರಸ್ಕಾರವಾಗಿದೆ
ಈ ಸಂಸ್ಥೆ ಮುಚ್ಚಿದ್ರೆ, ಮಲೆನಾಡು ಮುಳುಗುತ್ತೆ.

ನ್ಯೂಸ್ ಕೊಪ್ಪ, ಫೆ.16: ಜನವರಿ 3, 2017ರಂದು ಬೆಳ್ಳಿಹಬ್ಬ ಆಚರಿಸಿಕೊಂಡ ಸಾರಿಗೆ ಸಂಸ್ಥೆ ಇಲ್ಲಿವರೆಗೆ ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು.
ಅಂತಹಾ ಸಂಸ್ಥೆ ಈಗ ಸರ್ಕಾರದ ಅಸಡ್ಡೆಗೆ ಒಳಗಾಗಿ ತನ ಗತವೈಭವಕ್ಕೆ ಅಂತಿಮ ತೆರೆ ಎಳೆಯುವ ಸ್ಥಿತಿ ತಲುಪಿದೆ.

90ರ ದಶಕದಲ್ಲಿ ಲಾಭದಲ್ಲಿದ್ದ ಶಂಕರ್ ಟ್ರಾನ್ಸ್‌ಪೋರ್ಟ್‌ನ ಸಿಬ್ಬಂದಿಗಳು ಮಾಲೀಕರ ಬಳಿ ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟು 2 ತಿಂಗಳಿಗೂ ಹೆಚ್ಚು ಕಾಲ ಮುಷ್ಕರ ಕೈಗೊಂಡಿದ್ರು. ಕಾರ್ಮಿಕರ ಬೇಡಿಕೆ ಈಡೇರಿಸಲು ಒಪ್ಪದ ಮಾಲೀಕರು ಸಂಸ್ಥೆಯನ್ನ ಮುಚ್ಚಿದರು. ಕೆಲಸವಿಲ್ಲದೆ ಅತಂತ್ರರಾದ 123 ಕಾರ್ಮಿಕರು ಶಂಕರ್ ಟ್ರಾನ್ಸ್‌ಪೋರ್ಟ್‌ನವರು ಕೊಟ್ಟ ಪರಿಹಾರ 12 ಲಕ್ಷ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು, ಅದೇ ಸಂಸ್ಥೆಯ 6 ಹಳೇ ಬಸ್‍ಗಳನ್ನ ಕೊಂಡು 1991 ಮಾರ್ಚ್‍ನಲ್ಲಿ 8 ರಂದು ಸಹಕಾರ ಸಾರಿಗೆ ಆರಂಭಿಸಿದ್ದರು. ಇಡಿ ಏಷ್ಯ ಖಂಡದಲ್ಲೆ ಕಾರ್ಮಿಕರೆ ಮಾಲೀಕರಾದ ಒಂದು ಸಂಸ್ಥೆ ಅಂತ ಇದ್ದರೆ ಅದು ಕೊಪ್ಪದ ಸಹಕಸರ ಸಾರಿಗೆ ಸಂಸ್ಥೆ.

ಈ ಸಂಸ್ಥೆಯ ಸಾಹಸಕ್ಕೆ ನಿಬ್ಬೆರಗಾದ ಜಪಾನಿನ ಕ್ಯೊಟೊ ನಗರದ ರಿಟ್ಸುಮೆಕಿನ್ ಯುನಿರ್ವಸಿಟಿಯ ತಂಡ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನ್ನ ದೇಶದ ಸಹಕಾರ ಸಂಸ್ಥೆಯಲ್ಲಿ ಅಳವಡಿಸಿಕೊಂಡಿತು.


ಜಾಹಿರಾತು


ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಂಡಿಸಿದ ಪ್ರಬಂಧಕ್ಕೆ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ಪಿಎಚ್‍ಡಿಯನ್ನೇ ನೀಡಿ ಗೌರವಿಸಿದೆ. ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಸಹಕಾರ ಸಾರಿಗೆಯ ವೈಭವ ಪಠ್ಯವಾಯ್ತು

ಇಲ್ಲಿ ಕಾರ್ಮಿಕರೆಲ್ಲರೂ ಮಾಲೀಕರೇ ಆದ ಸಂಸ್ಥೆಯಲ್ಲಿ 75ಕ್ಕೂ ಹೆಚ್ಚು ಬಸ್‍ಗಳು ಮಲೆನಾಡಿಗರ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಪ್ರತಿ ನಿತ್ಯ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 30-40 ಸಾವಿರ ಜನ ನಿತ್ಯ ಪ್ರಯಾಣಿಸುತ್ತಿದ್ದರು. 25-26 ವರ್ಷ ಈ ಮಲೆನಾಡು ಮತ್ತು ಕರಾವಳಿಯ ಎಲ್ಲಾ ರಸ್ತೆಗಳಲ್ಲೂ ದಣಿವಿಲ್ಲದೆ ಓಡಿದ ಬಸ್ಸಿನ ಗಾಲಿಗಳು ತನ್ನ ಚೈತನ್ಯ ಕಳೆದುಕೊಂಡಿವೆ! . ತಿಂಗಳಿಗೆ ಡೀಸೆಲ್ ನಿಂದ 24 ಲಕ್ಷ ನಷ್ಟವಾದ್ರೆ, ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ನ ಹೊರೆ. ಹಾಗಾಗಿ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್ ಗಳ ಉಳಿಕೆ ಹಣವನ್ನು ನೀಡುವಂತೆ ಸರ್ಕಾರದ ಸಹಾಯ ಹಸ್ತವನ್ನು ಎದುರು ನೋಡ್ತಿದೆ
ಅಷ್ಟು ವರ್ಷ ತೆರಿಗೆ, ವಿಮೆ, ಕಟ್ಟಿ ಸರ್ಕಾರದ ಬೊಕ್ಕಸಕ್ಕೆ ತುಂಬಿದ್ದನ್ನು ನೆನಪಿಸಿ ಸಹಾಯ ಯಾಚಿಸಿದರೆ ಆಶ್ವಾಸನೆ ಸಿಕ್ಕಿತೆ ಹೊರತು ಸ್ಪಂದನೆ ಮರೀಚಿಕೆಯಾಯಿತು ಮತ್ತದೆ ರಾಜಕಾರಣಿಗಳ ಜಡ್ಡುಗಟ್ಟಿದ ಬುದ್ದಿ. ನೆರವಿಗಾಗಿ ಸಂಸ್ಥೆಯವರು ಸಿಎಂ ಬಿ.ಎಸ್.ವೈ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಂದು ಯಡಿಯೂರಪ್ಪ ಕೂಡ ಟ್ಯಾಕ್ಸ್ ವಿಚಾರದಲ್ಲಿ ನೆರವಿಗೆ ನಿಲ್ಲೋ ಭರವಸೆ ನೀಡಿದ್ದರು. ಆದ್ರೆ ಯಾವುದೂ ಈಡೇರಲಿಲ್ಲ.

ಕಾರ್ಮಿಕರಿಗೆ ಬೋನಸ್ ಇಲ್ಲದೆ ಅದೆಷ್ಟೋ ವರ್ಷವಾಯಿತು ತಿಂಗಳ ಸಂಬಳ ಕೊಡಲು ಹಣವಿಲ್ಲದೆ ಸಮಸ್ಯೆ ಜಟಿಲವಾದ್ದರಿಂದ ಇಂದಿನಿಂದ ಸಂಸ್ಥೆಗೆ ಬಾಗಿಲೆಳೆಯುವ ನಿರ್ದಾರ ಮಾಡಿದ್ದಾರೆ ಕಾರ್ಮಿಕರು. ರಾಜ್ಯವಾಳುವ ನಾಯಕರು! ಕೆಸಕ್ಕೆ ಬಾರದ ಬರಿಯ ಕುರ್ಚಿ ರಾಜಕಾರಣವನ್ನು ಬದಿಗಿಟ್ಟು ಈ ಸಂಸ್ಥೆಯ ಮೇಲೆ ಕನಿಕರ ತೋರಿದರೆ ಮಲೆನಾಡು ಮತ್ತು ಕರಾವಳಿಯನ್ನು ಬೆಸೆದ ಭಾವನಾತ್ಮಕ ಕೊಂಡಿ ಸ್ವಲ್ಪವಾದರೂ ಸುದಾರಿಸೀತು.


ಜಾಹಿರಾತು


ಮಲೆನಾಡ ಹಳ್ಳಿಗರ ಬದುಕು ಈ ಬಸ್ ಮೇಲೆ ನಿಂತಿದೆ. ಒಂದ್ ವೇಳೆ, ಸರ್ಕಾರ ಇವರಿಗೆ ಸ್ಪಂದಿಸಿದ್ದೇ ಆದಲ್ಲಿ ಈ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆಯ ಗತವೈಭವ ಮತ್ತೆ ಮರುಕಳಿಸೋದ್ರಲ್ಲಿ ಆಶ್ಚರ್ಯವಿಲ್ಲ.

……ವಿಕ್ರಮ್ ಕೊಪ್ಪ……..